ಭಾಷಿಕ ಪರಿವರ್ತನೆ / ಬದಲಾವಣೆ: -
ಒಂದು ಭಾಷೆ ಇನ್ನೊಂದು ಭಾಷೆಯಿಂದ ಧ್ವನಿಯನ್ನೂ ಪದಗಳನ್ನೂ ನುಡಿಗಟ್ಟುಗಳನ್ನೂ ಸ್ವೀಕರಿಸಿದುದರ ಪರಿಣಾಮವಾಗಿ ಭಾಷೆಯಲ್ಲಿ ಉಂಟಾಗುವ ಬದಲಾವಣೆ (ಲಿಂಗ್ವಿಸ್ಟಿಕ್ ಛೇಂಜ್). ಆದ್ದರಿಂದ ಭಾಷೆ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ಇದನ್ನು ದೃಢಪಡಿಸಿಕೊಳ್ಳಲು ಲಿಖಿತ ದಾಖಲೆಗಳಿರುವ ಯಾವುದೇ ಭಾಷೆಯನ್ನಾಯ್ದುಕೊಂಡು ಅದರ ಬೇರೆ ಬೇರೆ ಕಾಲದ ಎರಡು ದಾಖಲೆಗಳನ್ನು ನೋಡಬಹುದು. ಹಳಗನ್ನಡ ಕಾವ್ಯ, ಶಾಸನಗಳ ಬಗ್ಗೆ ತಿಳಿಯಬೇಕಾದರೆ ಆ ಬಗ್ಗೆ ವಿಶೇಷ ಅಧ್ಯಯನವಿಲ್ಲದಿದ್ದರೆ ಸಾಧ್ಯವಾಗುವುದಿಲ್ಲ. ಭಾಷೆ ಬದಲಾಗುತ್ತಿರುತ್ತದೆ ಎಂಬುದಕ್ಕೆ ಈ ನಿದರ್ಶನ ಸಾಕು.
ಭಾಷೆ ಸಮಾಜದ ಪ್ರಮುಖ ಅಭಿವ್ಯಕ್ತಿ ಮಾಧ್ಯಮವಾದ್ದರಿಂದ ಸಮಾಜದಲ್ಲಿ ರಾಜಕೀಯ, ಸಾಂಸ್ಕøತಿಕ ಮುಂತಾದ ಕಾರಣಗಳಿಂದಾಗಿ ಬದಲಾವಣೆಯಾದಂತೆ ಅದು ಭಾಷೆಯಲ್ಲೂ ವ್ಯಕ್ತವಾಗುತ್ತದೆ. ಈ ಬದಲಾವಣೆಗೆ ಕಾರಣ ಅನ್ಯಭಾಷೆಗಳಾದ್ದರಿಂದ ಇದನ್ನು ಬಾಹ್ಯಕಾರಣ ಎಂದು ಕರೆಯಲಾಗಿದೆ ಉಚ್ಚಾರಣೆಯ ಸೌಲಭ್ಯಕ್ಕಾಗಿ ಭಾಷಾರೂಪಗಳನ್ನು ಮೊಟಕುಗೊಳಿಸುವುದು, ರೂಪಬದಲಾಯಿಸುವುದು, ಧ್ವನಿಗಳನ್ನು ಕೈಬಿಡುವುದು ಅಥವಾ ಮಾನಸಿಕ ಕಾರಣಗಳಿಂದಾಗಿ ಹೊಸರೂಪಗಳನ್ನು ಸೃಷ್ಟಿಸುವುದು-ಇವು ಭಾಷೆಯನ್ನು ಬದಲಿಸುವ ಆಂತರಿಕ ಕಾರಣಗಳು. ಹೀಗೆ ಭಾಷೆಯನ್ನು ಬದಲಿಸುವುದಕ್ಕಿರುವ ಕಾರಣಗಳನ್ನು ಬಾಹ್ಯ, ಅಂತರಿಕ ಎಂದು ಪ್ರತ್ಯೇಕಿಸಿದರೂ ಅವು ಪರಸ್ಪರ ಒಂದನ್ನೊಂದು ಪ್ರಚೋದಿಸುತ್ತವೆ ಎಂಬ ಪ್ರಚಾರ ಇಲ್ಲಿ ಮುಖ್ಯವಾದುದು.

ಭಾಷಿಕ ಪರಿವರ್ತನೆ ವಿಶೇಷ ಪ್ರಮಾಣದಲ್ಲಿ ನಡೆಯುವುದು ಪದ ಸಮೂಹ ಅರ್ಥ ವ್ಯವಸ್ಥೆ ಹಾಗೂ ಧ್ವನಿ ವ್ಯವಸ್ಥೆಗೆ ಸಂಬಂಧಪಟ್ಟಂತೆ. ಭಾಷಾ ಸಂಪರ್ಕದಿಂದ ಸಹಜವಾಗಿ ಅಥವಾ ಅವಶ್ಯಕತೆಗಳಿಗಾಗಿ ಅಥವಾ ಇನ್ನಿತರ ಕಾರಣಗಳಿಗಾಗಿ ಪದಸ್ವೀಕಾರ ನಡೆಯುತ್ತಲೇ ಇರುತ್ತದೆ. ಇದರಿಂದ ನೇರಪರಿಣಾಮವಾಗುವುದು ಭಾಷೆಯ ಅರ್ಥ ಹಾಗೂ ಧ್ವನಿವ್ಯವಸ್ಥೆಯ ಮೇಲೆ. ಅನಂತರ ವ್ಯಾಕರಣ ವ್ಯವಸ್ಥೆಯ ಮೇಲೆ. ಭಾಷಾಶಾಸ್ತ್ರಕ್ಕೆ ನೇರವಾಗಿ ಸಂಬಂಧಿಸಿದ ವ್ಯಾಕರಣ ವ್ಯವಸ್ಥೆ, ಧ್ವನಿಮಾವ್ಯವಸ್ಥೆ ಮತ್ತು ಅಕೃತಿಮಾ-ಧ್ವನಿಮಾ ವಿಜ್ಞಾನ ವ್ಯವಸ್ಥೆಯನ್ನು ಭಾಷಾರಚನೆಯ ಕೇಂದ್ರಭಾಗವೆಂದೂ ಧ್ವನಿವ್ಯವಸ್ಥೆ ಮತ್ತು ಅರ್ಥವ್ಯವಸ್ಥೆಗಳನ್ನು ಪರಿಧಿಭಾಗಗಳೆಂದೂ ಕರೆಯಲಾಗಿದೆ.

ಭಾಷಿಕ-ಪರಿವರ್ತನೆಯ ಕಾರಣಗಳಲ್ಲಿ ಮುಖ್ಯವಾದವು ಮೂರು: 1 ಧ್ವನಿ ಬದಲಾವಣೆ, 2 ಸ್ವೀಕರಣ 3 ಸಾದೃಶ್ಯ. ಇವಕ್ಕೆ ತಂತ್ರಗಳು ಎಂದು ಹೆಸರು. ಇವು ಭಾಷೆಯ ಎಲ್ಲ ವ್ಯವಸ್ಥೆಗಳಲ್ಲಿಯೂ ಬದಲಾವಣೆ ಉಂಟುಮಾಡುತ್ತವೆ. ಇಲ್ಲಿ ಕಾರಣ ಪರಿಣಾಮಗಳನ್ನು ಖಚಿತವಾಗಿ ಪ್ರತ್ಯೇಕಿಸುವುದು ಕಷ್ಟ. ಧ್ವನಿ ಬದಲಾವಣೆ ಇತರ ಕಾರಣಗಳಿಂದುಟಾಗುವುದರಿಂದ ಅದು ಪರಿಣಾಮವೂ ಹೌದು; ಇತರ (ಧ್ವನಿಮಾ, ವ್ಯಾಕರಣ) ಬದಲಾವಣೆಗಳಿಗೆ ದಾರಿಮಾಡಿಕೊಂಡುವುದರಿಂದ ಅದು ಕಾರಣವೂ ಹೌದು. ಕನ್ನಡದಲ್ಲಿ ಬೇರೆ ಬೇರೆ ಕಾಲದಲ್ಲಿ ನಡೆದ ಪ್>ಹ್. ವ್>ಬ್ ಬದಲಾವಣೆಗಳು ಧ್ವನಿ ಹಾಗೂ ಧ್ವನಿಯಾ ಬದಲಾವಣೆಗಳು. ಸ್ವೀಕರಣ ನಡೆದಾಗ ಮೊದಲು ಪದಸಮೂಹದಲ್ಲಿ ವ್ಯತ್ಯಾಸ ಕಾಣಿಸಿಕೊಂಡು ಅನಂತರ ವ್ಯಾಕರಣ ವ್ಯವಸ್ಥೆಯಲ್ಲಿ ಹಾಗೂ ಧ್ವನಿ ವ್ಯವಸ್ಥೆಯಲ್ಲಿ ವ್ಯತ್ಯಾಸಕಾಣಿಸಿಕೊಳ್ಳುತ್ತದೆ. ಬ್ಯಾಂಕ್, ರೇಡಿಯೊ, ಫ್ಯಾನು, ಕೆಫೆ ಇತ್ಯಾದಿ ಪದಗಳು ಇಂಗ್ಲಿಷಿನಿಂದ ಕನ್ನಡಕ್ಕೆ ಬಂದು ಸೇರಿದ ಪದಗಳು. ಕನ್ನಡದ ಗೌಡತಿ, ಹೂವಾಡಗಿತ್ತಿ, ಬಡಿಗ, ಹಣವಂತೆ ಮುಂತಾದ ರೂಪಗಳಲ್ಲಿಯ -ಇತಿ-ಇತ್ತಿ, -ಇಗ, -ವಂತ ಮುಂತಾದ ಪ್ರತ್ಯಯಗಳು ಕನ್ನಡದ ಪ್ರಕೃತಿಗಳಿಗೆ ಹತ್ತಿ ಕನ್ನಡದ ಪ್ರತ್ಯಯಗಳು ಎನಿಸಿಕೊಂಡವು. ಕೆಲವೊಮ್ಮೆ ಅನ್ಯಭಾಷೆಯ ರೂಪಗಳನ್ನು ನೇರವಾಗಿ ಸ್ವೀಕರಿಸುವ ಬದಲು ಅಲ್ಲಿಯ ಪದರಚನೆ ಅಥವಾ ವಾಕ್ಯರಚನಾ ಮಾದರಿಗಳನ್ನು ಸ್ವೀಕರಿಸಲಾಗುತ್ತದೆ. ಉದಾಹರಣೆಗೆ. ಸಂಸ್ಕøತದಲ್ಲಿದ್ದ ಕರ್ಮಣಿ ಪ್ರಯೋಗ ಕನ್ನಡಕ್ಕೆ ಬಂದದ್ದು. ಹಾಗೆಯೇ ರಾಮನೂ ಕೃಷ್ಣನೂ ಎಂದು ಬಳಕೆಯಾಗುತ್ತಿದ್ದ ಕನ್ನಡ, ಇಂಗ್ಲಿಷಿನ ಪ್ರಭಾವದಿಂದ ರಾಮ ಮತ್ತು ಕೃಷ್ಣ ಎಂದಾಯಿತು. ಗುಲ್ಬರ್ಗಾ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಅವನು ಅಂದ ಕೀ ರಾಮ ಹೋದ (ರಾಮ ಹೋದನೆಂದು ಅವನು ಹೇಳಿದ) ಎಂಬಂಥ ಹಿಂದಿ-ಉರ್ದು ಮಾದರಿಯ ವಾಕ್ಯಗಳು ಬಳಕೆಗೊಳ್ಳುತ್ತದೆ. ಇಲ್ಲಿ ನೆನಪಿನಲ್ಲಿಡಬೇಕಾದ ಸಂಗತಿಯೊಂದಿದೆ. ಸ್ವೀಕರಣವಾದಾಗಲೆಲ್ಲ ವ್ಯಾಕರಣ ಹಾಗೂ ವಾಕ್ಯವ್ಯತ್ಯಾಸಗಳು ಆಗಲೇಬೇಕೆಂದಿಲ್ಲ. ಸ್ವೀಕರಣ ನಡೆಯುವ ಭಾಷೆಗಳ ರಚನೆಯಲ್ಲಿಯ ವ್ಯತ್ಯಾಸ, ನಿಕಟಸಂಪರ್ಕ ಹಾಗೂ ಅವುಗಳ ನಡುವಿರುವ ಸಾಮಾಜಿಕ, ಸಾಂಸ್ಕøತಿಕ (ಮೇಲು-ಕೀಳು) ಬೇದ ಇವೆಲ್ಲ ಈ ಬದಲಾವಣೆಯನ್ನು ನಿಯಂತ್ರಿಸುತ್ತವೆ. ಸ್ವೀಕರಿಸುವ ಭಾಷೆ ಇನ್ನೊಂದು ಭಾಷೆಗಿಂತ ಕೆಳಮಟ್ಟದ್ದು ಎನಿಸಿಕೊಂಡಿದ್ದರೆ ಈ ಸ್ವೀಕರಣದಿಂದ ಇತರ ಬದಲಾವಣೆಯ ಜೊತೆಗೆ ವಿವಿಧ ಶೈಲಿಗಳ ನಿರ್ಮಾಣ ಕಾಣಿಸಿಕೊಳ್ಳುತ್ತದೆ.
ಸಾದೃಶ್ಯರೂಪ ನಿರ್ಮಾಣ: ಇದು ಸ್ವೀಕರಣದಷ್ಟು ವ್ಯಾಪಕ ಬದಲಾವಣೆ ಉಂಟು ಮಾಡುವಂಥದಲ್ಲ. ವ್ಯಾಕರಣ ದೃಷ್ಟಿಯಿಂದ ತಪ್ಪಾಗಿರಲಿ ಬಿಡಲಿ ಒಂದು ರೂಪವನ್ನು ಅನುಸರಿಸಿ ಇನ್ನೊಂದು ರೂಪ ಬದಲಾಗುತ್ತಿದ್ದರೆ ಅಲ್ಲಿ ಸಾದೃಶೀಕರಣ ನಡೆಯುತ್ತಿದೆ. ಎಂದರ್ಥ. ಉದಾಹರಣೆಗೆ ನಿಂತು ಎಂಬ ರೂಪವನ್ನು ಮಾದರಿಯಾಗಿಟ್ಟುಕೊಂಡು. ಕನ್ನಡದ ಕುಳಿತು ಎಂಬ ರೂಪ ಕುಂತು ಎಂದಾಯಿತು. ಹಾಗೆಯೇ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಕೆಲವರು ಕಕ್ಕು-ಕಕ್ಕಿದ, ಸೊಕ್ಕು-ಸೊಕ್ಕಿದ ಇತ್ಯಾದಿ ರೂಪಬದಲಾವಣೆ ಅನುಸರಿಸಿ ನಗು ಎಂಬ ಪದದಿಂದ ನಕ್ಕು ನಕ್ಕಿದ ಎಂಬ ರೂಪಗಳು ಅಗಿವೆ. ಹಸಿರು ಹೋಗಿ ಹಸರು, ಮರೆತು ರೂಪದ ಬದಲು ಮರತು-ಇವೇ ಮುಂತಾದವು ಸೃಷ್ಟಿಯಾಗಿವೆ. ಇಲ್ಲಿ 'ಇ' 'ಎ' ಗಳು ಕ್ರಮವಾಗಿ ಮುಂದಿನ ಹಾಗೂ ಹಿಂದಿನ ಸ್ವರ ಅನುಸರಿಸಿ ತದ್ರೂಪ ಹೊಂದಿವೆ. ಸಾದೃಶೀಕರಣ ನಡೆಯಲು ಅದೇ ಭಾಷೆಯ ರೂಪಗಳು ಕಾರಣವಾದಂತೆ ಅನ್ಯಭಾಷೆಯ ರೂಪಗಳೂ ಕಾರಣವಾಗುತ್ತವೆ. ಉದಾಹರಣೆಗೆ ರಾಮ ಮತ್ತು ಕೃಷ್ಣ ಎಂಬ ಕನ್ನಡ ರೂಪ ಇಂಗ್ಲಿಷಿನಲ್ಲಿರುವ ರಾಮ ಅಂಡ್ ಕೃಷ್ಣ ಎಂಬ ರೂಪಕ್ಕೆ ಸಂವಾದಿಯಾಗಿ ಹುಟ್ಟಿದುದು ಎನ್ನಬಹುದು.

ಈ ತಂತ್ರಗಳಲ್ಲದೆ ಇನ್ನೂ ಕೆಲವು ತಂತ್ರಗಳು ಉಂಟು. ಅವು ಸದೃಶಾಕ್ಷರ ಲೋಪ, ವರ್ಣಪಲ್ಲಟ, ಸಮರೂಪಧಾರಣೆ ಮುಂತಾದವು. ವೀರರಾಜಪೇಟೆ ಎಂಬ ಹೆಸರು ಮೊಟಕುಗೊಂಡು ವಿರಾಜಪೇಟೆ ಎಂದಾಗಿರುವಲ್ಲಿ 'ರ ಕಾರ ಲೋಪವಾಗಿರುವುದು ಸದೃಶಾಕ್ಷರಲೋಪದ ಫಲ. ಕಾಗದ ಕಾದಗವಾಗಿರುವುದು ಅಸಗ ಅಗಸ ಎಂದಾಗಿರುವುದು ವರ್ಣಪಲ್ಲಟದಿಂದಾಗಿ, ಬರ್ತಾನೆ ಬತ್ತಾನೆ ಆಗುವುದು, ಗರ್ದೆ ಗದ್ದೆ ಆಗಿರುವುದು ಸಮರೂಪಧಾರಣೆಯಿಂದಾಗಿ ಈ ವ್ಯತ್ಯಾಸಗಳಿಗೆ ಕಾರಣ ಉಚ್ಚಾರಣಾ ಸೌಲಭ್ಯವೋ ಶ್ರುತಿದೋಷವೋ ಆಗಿರುತ್ತದೆ.

ಭಾಷಾಪರಿವರ್ತನೆಗೆ ಈ ಕಾರಣಗಳಲ್ಲದೆ ಇನ್ನೂ ಅನೇಕ ಕಾರಣಗಳಿರುತ್ತವೆ. ಕೆಲವೊಂದು ಪರಿವರ್ತನೆಗಳಿಗೆ ಕಾರಣಗಳನ್ನು ಹೇಳುವುದು ಕಷ್ಟ. ಆದರೂ ಪರಿವರ್ತನೆಯ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ಸಾಮಾಜಿಕ, ಸಾಂಸ್ಕøತಿಕ ಕಾರಣಗಳಿಂದಾದ, ಪರಭಾಷೆ ಹಾಗೂ ತತ್ಪರಿಣಾಮವಾಗಿ ಆದ ಸ್ವೀಕರಣ ಪ್ರಭಾವ ಅಥವಾ ಕೆಲವು ಪ್ರಸಿದ್ಧ ವ್ಯಕ್ತಿಗಳ ಸೃಷ್ಟಿ ಭಾಷೆಯಲ್ಲಿಯ ವ್ಯವಸ್ಥೆಯನ್ನು ಮುರಿಯತೊಡಗುತ್ತದೆ. ಆದರೆ ಭಾಷೆ ಪುನಃ ವ್ಯವಸ್ಥೆಗೆ ಬರಲು ಹವಣಿಸುತ್ತದೆ. ಇದಕ್ಕಾಗಿ ಸಾದೃಶೀಕರಣ, ಸಮರೂಪಧಾರಣೆಯಂಥ ತಂತ್ರಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿಯೇ ಮತ್ತೆ ಭಾಷಾಸ್ವೀಕರಣವೂ ನಡೆಯಬಹುದು. ಹೀಗೆ ಒಂದೆಡೆ ವ್ಯವಸ್ಥೆಯ ವಿರುದ್ಧ ಇನ್ನೊಂದೆಡೆ ವ್ಯವಸ್ಥೆಯ ಕಡೆಗೆ ಪರಿವರ್ತನೆ ನಡೆಯುತ್ತಲೇ ಇರುತ್ತವೆ.		
(ಕೆ.ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ